ಇಪಿಕ್ಯಾಕುವಾನ

ಕಿಫೇಲಿಸ್ ಇಪಿಕ್ಯಾಕುವಾನ ಎ. ರಿಚ್. (ರಯೊ ಇಲ್ಲವೇ ಬ್ರೆಜಿóಲಿನದು). ಇಲ್ಲವೇ ಕಿಫೇಲಿಸ್ ಅಕ್ಯುಮಿನೇಟ (ಕಾರ್ಟಜೀನ, ನಿಕರಾಗುವದ್ದು) ಕಾರ್ಸ್‍ಟೆನ್ ಪೊದೆಗಿಡಗಳ ಒಣ ಬೇರು ಇಲ್ಲವೇ ಬೇರುಕಾಂಡದೊಂದಿಗಿನ (ರೈಜೋóಂ) ಬೇರು. ಇದು ದಕ್ಷಿಣ ಅಮೆರಿಕ, ಮಲಯ, ಬರ್ಮಗಳಲ್ಲಿ ಬೆಳೆವುದು. ಆಯಾ ದೇಶಗಳ ಹೆಸರಿನ ಬಗೆಗಳಿವೆ. ದಕ್ಷಿಣ ಅಮೆರಿಕದ ಆದಿವಾಸಿಗಳು ಇದನ್ನು ಮದ್ದಾಗಿ ಬಳಸುತ್ತಿದ್ದುದು 17ನೆಯ ಶತಮಾನದಲ್ಲಿ ವೈದ್ಯಕ್ಕೆ ಬಂತು. ಇಪಿಕ್ಯಾಕುವಾನದಲ್ಲಿ ಮುಖ್ಯವಾಗಿ ಎರಡು ಆಲ್ಕಲಾಯ್ಡುಗಳಿವೆ; ಎಮಿಟೀನ್, ಕಿಫೇಲೀನ್ ವೈದ್ಯ ಚಿಕಿತ್ಸೆಯಲ್ಲಿ ಎಮಿಟೀನ್ ಬಳಕೆಯಲ್ಲಿದೆ. ಇಪಿಕ್ಯಾಕುವಾನ ಪುಡಿ ನುಂಗಿದರೆ ಜಠರ, ಕರುಳುಗಳನ್ನು ಕೆರಳಿಸುವುದರಿಂದ ಓಕರಿಕೆ, ವಾಂತಿ, ಉಚ್ಚಾಟ ಆಗುವುದಲ್ಲದೆ ಹಿಮ್ಮುರಿಗೆಯಿಂದ (ರಿಫ್ಲೆಕ್ಸ್‍ಲಿ) ಬೆವರಿಕೆಯೂ ಪಂಗುಸಿರ್ನಾಳದ (ಬ್ರಾಂಕಿಯಲ್) ಗ್ರಂಥಿಗಳ ಸುರಿಕೆಯೂ ಹೆಚ್ಚುತ್ತವೆ. ವಾಂತಿ ಆಗಿಸದ ಪ್ರಮಾಣದಲ್ಲಿ ಕೊಟ್ಟಾಗಲೂ ಈ ಗ್ರಂಥಿಗಳ ಸುರಿಕೆಯನ್ನು ಹೆಚ್ಚಿಸುವುದರಿಂದ, ಎದೆಯಲ್ಲಿ ಸೇರಿಬಿಟ್ಟಿರುವ ಕಫವನ್ನು ಹೊರಕಳೆಯಲು ನೆರವಾಗುವುದೆಂದಿದ್ದ ಹಳೆಯ ಕಾಲದ ನಂಬಿಕೆಗೆ ಆಧಾರವಿಲ್ಲ. ಇಷ್ಟಾದರೂ ಕಫ ಕಳೆವ ಕೆಮ್ಮಿನ ಮದ್ದುಗಳಲ್ಲಿ ಈಗಲೂ ಸೇರಿಸುವ ವಾಡಿಕೆ ತಪ್ಪಿಲ್ಲ. ವಾಂತಿಗೆ ಬಹುಮಟ್ಟಿನ ಕಾರಣ ಅದರಲ್ಲಿನ ಕಿಫೇಲೀನ್, ಈಗ ಇಪಿಕ್ಯಾಕುವಾನ ವಾಂತಿಕಾರಕವಾಗಿ (ಎಮಿಟಿಕ್) ಬಳಕೆಯಲ್ಲಿಲ್ಲ. ಡೋಮರನ ಪುಡಿಯಲ್ಲಿ ಇಪಿಕ್ಯಾಕುವಾನ ಬೇರಿನ ಪುಡಿ, ಅಫೀಮು ಪುಡಿ ಒಂದೊಂದೂ 10% ಪಾಲು ಇರುತ್ತದೆ. ಈ ಪುಡಿಗೆ ಮೆಲುಪಿನ ಶಾಮಕ, ನೋವು ಕಳೆವ, ಬೆವರಿಸುವ ಗುಣಗಳಿವೆ. ನೆಗಡಿ ಮತ್ತಿತರ ಬೇನೆಗಳಲ್ಲಿ ಅನುಕೂಲಕರ.

	ಎಮಿಟೀನ್: ಅ28ಊ37(ಅಊ2)ಓ2ಔ4, (ಮೀಥೈಲ್ ಕಿಫೇಲೀನ್) ಇಪಿಕ್ಯಾಕುವಾನ ಬೇರಿಂದಲೇ ಅಲ್ಲದೆ ಕೃತಕವಾಗಿಯೂ ತಯಾರಾಗುತ್ತದೆ. ಲೋಳೆಪೊರೆಯನ್ನು ಕೆರಳಿಸುವುದರಿಂದ ಇದನ್ನು ನುಂಗಿದರೆ ವಾಂತಿ ಮಾಡಿಸುತ್ತದೆ. ಇದಕ್ಕಾಗಿಯೇ ಇದನ್ನು ಮದ್ದಾಗಿ ಕೊಡಲು ಚರ್ಮದಡಿ ಆಳವಾಗಿ ಇಲ್ಲವೇ ಸ್ನಾಯುವಿನೊಳಗಿ ಚುಚ್ಚಿ ಹೊಗಿಸಬೇಕು. ಇದರ ಮುಖ್ಯ ಬಳಕೆ ಒಂದು ಬಗೆಯ ಆಮಶಂಕೆಯಾಗಿಯೂ ತೋರುವ ಚಲ್ಕಣಬೇನೆಯಲ್ಲಿ (ಅಮೀಬಿಯಾಸಿಸ್). ಬಿಸ್ಮತ್ ಅಯೊಡೈಡ್ ಒಂದಿಗೆ ದೊರೆಯುವ ಇದರ ಹೈಡ್ರೊಕ್ಲೋರೈಡಿನ ಲವಣಗಳು ಮದ್ದುಗಳು. ಮುಖ್ಯವಾಗಿ, ಕರುಳಲ್ಲಿ ಇಲ್ಲವೇ ಈಲಿ, ಪುಪ್ಪುಸಗಳ ತೆರನ ಒಳಾಂಗಗಳಲ್ಲಿ ಕೂರಾದ ಚಲ್ಕಣಬೇನೆ ಆಗಿ ಹೊಟ್ಟೆ ನುಲಿತ, ಜ್ವರ, ನೋವು. ಉಚ್ಚಾಟಗಳಿದ್ದಲ್ಲಿ ಮಾತ್ರ ಕೆಲವೇ ದಿನಗಳು ಕೊಟ್ಟರೆ ಇದರ ಪ್ರಭಾವ ಹೆಚ್ಚು. ಈಲಿಯಲ್ಲಿ ಉರಿತವೊ ಕುರುವೊ ಆಗಿದ್ದರಂತೂ ಇನ್ನೂ ಪ್ರಭಾವಕರ. ಆಮಶಂಕೆ ಬೇರೂರಿದ್ದರೆ, ರೋಗ ಅನುಭವಿಸದೆ ಕೇವಲ ಸೊಂಕನ್ನು ಹೊತ್ತು ಸಾಗಿಸಿ ಅಂಟಿಸುವ ರೋಗಿಗಳಲ್ಲಿ ಇದರ ಪ್ರಭಾವವಿಲ್ಲ. ಎಮಿಟೀನ್ ಕೊಟ್ಟಮೇಲೆ ಮೈಯಲ್ಲೇ ಬಹುಕಾಲ ಉಳಿದುಬಿಡುವುದರಿಂದ ವಿಷಕರವಾಗಬಹುದು, ಇದು ಗುಂಡಿಗೆಯ ಸ್ನಾಯುವಿಗೆ ಶಾಶ್ವತವಾಗಿ ವಿಷಕರ. ಆದ್ದರಿಂದ. ಇದನ್ನು ಪಡೆದ ರೋಗಿ ಪೂರಾ ಆರಾಮವಾಗಿರುವಂತೆ ಮಲಗಿರಲೇಬೇಕು. ಬೇಕಿರುವುದಕ್ಕಿಂತ ಹೆಚ್ಚಿನ ಪ್ರಮಾಣವನ್ನು ಕೊಡುವುದು ಎಂದಿಗೂ ತರವಲ್ಲ. ಇದರ ಬದಲಾಗಿ ಆಮಶಂಕೆ ಚಿಕಿತ್ಸೆಗಾಗಿ ಕ್ಲೋರೊಕ್ವೀನ್ ಇತ್ಯಾದಿ ಮದ್ದುಗಳಿವೆ. (ನೋಡಿ- ಆಮಶಂಕೆ).
	(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ